ಜೋಶಿ, ಜಿ ಬಿ 
190493. ಜಡಭರತ, ಅನಾಮಧೇಯ ಎಂಬ ಕಾವ್ಯನಾಮಗಳಿಂದ ಪ್ರಸಿದ್ಧರಾದ ನಾಟಕಕಾರರು ಹಾಗೂ ಪ್ರಕಾಶಕರು. ಗೋವಿಂದ ಭೀಮಾಚಾರ್ಯ ಜೋಶಿ ಇವರ ಪೂರ್ಣ ಹೆಸರು. 1904 ಜುಲೈ 29ರಂದು ಗದಗ ತಾಲ್ಲೂಕಿನ ಹೊಂಬಳದಲ್ಲಿ ಜನಿಸಿದರು. ಇವರ ತಾಯಿ ಭಾರತೀಬಾಯಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮಿಡಿಯೇಟ್‍ವರೆಗೆ ಇವರ ವಿದ್ಯಾಭ್ಯಾಸ ನಡೆಯಿತು. ಸಾಹಿತಿಯಾಗಿ ಕವನ, ಕಾದಂಬರಿ, ನಾಟಕಗಳನ್ನು ರಚಿಸಿದ ಇವರು ಮನೋಹರ ಗ್ರಂಥಮಾಲೆ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿ (1933) ಕನ್ನಡದಲ್ಲಿ ಕೆಲವು ಅತ್ಯುತ್ತಮ ಕೃತಿಗಳನ್ನು, ಲೇಖಕರನ್ನು ಬೆಳಕಿಗೆ ತಂದರು. ಕಲೋಪಾಸಕ ಮಂಡಲ ಎಂಬ ಹವ್ಯಾಸಿ ನಾಟಕ ತಂಡವನ್ನು ಕಟ್ಟಿ ಹೊಸ ಹೊಸ ನಾಟಕಗಳನ್ನು ರಂಗಕ್ಕೆ ತಂದ ಇವರು ಪಂಡಿತ ಭೀಮಸೇನ ಜೋಶಿ, ಪ್ರಭುದೇವ ಸರದಾರರಂತಹವರನ್ನೂ ರಂಗಭೂಮಿಗೆ ತಂದರು.

	ಇವರು ಧರ್ಮಸೆರೆ (1934) ಎಂಬ ಕಾದಂಬರಿಯನ್ನೂ ಜಡಭರತನ ಕನಸುಗಳು (1949), ಸ್ವಪ್ನ ಕಥನ ಎಂಬ ಕೃತಿಗಳನ್ನೂ ಜೀವಫಲ (1957) ಎಂಬ ಕವನ ಸಂಗ್ರಹವನ್ನೂ ಮೂಕಬಲಿ (1956), ಕದಡಿದ ನೀರು (1963), ಆ ಊರು ಈ ಊರು (1973), ಸತ್ತವರ ನೆರಳು (1974), ನಾನೇ ಬಿಜ್ಜಳ (1979), ಪರಿಮಳ ದವರು (1986), ಜರ್ಮನ್ ಬಂಗ್ಲೆ (1994) ಮೊದಲಾದ ಏಳು ನಾಟಕಗಳನ್ನೂ ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಕುಸಿಯುತ್ತಿರುವ ಮೌಲ್ಯಗಳ ಬಗ್ಗೆ ಕಾಳಜಿ, ಗ್ರಾಮೀಣ ಬದುಕಿನ ಮೌಲ್ಯಗಳ ಜತನ, ಇತಿಹಾಸದಲ್ಲಿನ ಸತ್ಯಾನ್ವೇಷಣೆ ಮುಖ್ಯ ಆಶಯವಾಗಿದೆ. ಮೊದಲಿಗೆ ಅಂಬಿಕಾತನಯದತ್ತರ ನೇತೃತ್ವದಲ್ಲಿ ಗೆಳೆಯರ ಗುಂಪಿನೊಂದಿಗೆ ತಮ್ಮನ್ನು ಗುರುತಿಸಿಕೊಂಡ ಜೋಶಿಯವರು, ಜಯಕರ್ನಾಟಕ ಪತ್ರಿಕೆಯ ಗುಂಪಿನಿಂದ ಹೊರಬಂದು ಪ್ರಹ್ಲಾದ ನರೇಗಲ್, ಗೋವಿಂದರಾವ್ ಚುಳುಕಿ, ಬೆಟಗೇರಿ ಕೃಷ್ಣಶರ್ಮರು ಆರಂಭಿಸಿದ ಮನೋಹರ ಗ್ರಂಥಮಾಲೆಯಲ್ಲಿ ಸೇರಿಕೊಂಡರು. ಮುಂದೆ ಒಂದೇ ವರ್ಷದಲ್ಲಿ ಈ ಗ್ರಂಥಮಾಲೆಯ ಸಂಪೂರ್ಣ ವ್ಯವಹಾರವನ್ನು ಕೈಗೆತ್ತಿಗೊಂಡು ತಮ್ಮ ಆಯುಷ್ಯ ಪೂರ್ತ ಇದನ್ನು ಕರ್ನಾಟಕದ ಪ್ರತಿಷ್ಠಿತ ಪ್ರಕಟಣ ಸಂಸ್ಥೆಯಾಗಿ ಬೆಳೆಸಿದರು. ಈ ಗ್ರಂಥಮಾಲೆಯಲ್ಲಿ ದ.ರಾ.ಬೇಂದ್ರೆ, ವಿ.ಕೃ.ಗೋಕಾಕ್, ರಂ.ಶ್ರೀ.ಮುಗಳಿ, ಕೀರ್ತಿನಾಥ ಕುರ್ತಕೋಟಿ ಇವರು ಸಾಹಿತ್ಯ ಸಲಹೆಗಾರರಾಗಿದ್ದರು.

	ಮೂರು ಸಂಪುಟಗಳಲ್ಲಿ ಪ್ರಕಟವಾದ ನಡೆದು ಬಂದದಾರಿ (1958-60), ಐದು ಸಂಪುಟಗಳಲ್ಲಿ ಪ್ರಕಟವಾದ ಪುಟಬಂಗಾರ (1986-88) ಮನೋಹರ ಗ್ರಂಥಮಾಲೆಯ ಮಹತ್ವದ ಪ್ರಕಟಣೆಗಳಾಗಿವೆ. ಈ ಪ್ರಕಟಣೆಗಳ ಹಿಂದೆ ಜೋಶಿಯವರ ಶ್ರಮ, ನೆರವು ಅಪಾರವಾಗಿತ್ತು. ಇವರು ವಿಮರ್ಶೆಗೆ ಮೀಸಲಾದ ಮನ್ವಂತರ ಎಂಬ ಷಾಣ್ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು (1962-75). ಇವರು ಸಂಪಾದಿಸಿದ, ಪ್ರಕಟಿಸಿದ ಕೃತಿಗಳಲ್ಲಿ ಹೊಸನೋಟ, ಹೊಸ ವಿಚಾರಗಳನ್ನು ಪುರಸ್ಕರಿಸುವ ಧೋರಣೆಯನ್ನು ಕಾಣಬಹುದಾಗಿದೆ.

	ಇವರ ಸಾಹಿತ್ಯ ಸಾಧನೆಗಾಗಿ ಅನೇಕ ಗೌರವ ಪ್ರಶಸ್ತಿಗಳು ಲಭ್ಯವಾಗಿವೆ. ಮೂಕಬಲಿ, ಕದಡಿದ ನೀರು, ಸತ್ತವರ ನೆರಳು, ನಾನೇ ಬಿಜ್ಜಳ, ಪರಿಮಳದವರು  ಈ ನಾಟಕಗಳಿಗೆ ವರ್ಷದ ಅತ್ಯುತ್ತಮ ನಾಟಕ ಪ್ರಶಸ್ತಿ ಬಂದಿದೆ. 1963ರಲ್ಲಿ ಇವರಿಗೆ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿತು. 1986ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ, 1989ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಶ್ರೇಷ್ಠ ನಾಟಕಕಾರ ಪ್ರಶಸ್ತಿ ಇವರಿಗೆ ಲಭ್ಯವಾಗಿದೆ. ಭಾರತೀಯ ಭಾಷೆಗಳಲ್ಲಿನ ಉತ್ತಮ ಪ್ರಕಾಶನಕ್ಕಾಗಿ 1993ರಲ್ಲಿ ಇವರಿಗೆ ಅಖಿಲ ಭಾರತ ಪ್ರಕಾಶಕರ ಫೆಡರೇಶನ್ ಪ್ರಶಸ್ತಿಯನ್ನು ನೀಡಲಾಯಿತು.

	ಇವರು 1993 ಡಿಸೆಂಬರ್ 26ರಂದು ಧಾರವಾಡದಲ್ಲಿ ನಿಧನರಾದರು.			  (ಎಸ್.ಎಂ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ